Saturday, November 27, 2010

ನಾವು ಎಲ್ಲಿ ಹೋದರು ಸೂಪರ್....

ಯಾವ ಯಾವುದೊ ಅನಿವಾರ್ಯ ಕಾರಣಗಳಿಂದ ಬೇಜಾರಾಗಿ ಆಗಿ ಆಗಿ ಆಗಿ...ಆ ಬೇಜಾರಿಗು ಬೇಜಾರಾಗಿ ಈಗ ಅದು ಖುಷಿಯಾಗಿ ಮಾರ್ಪಾಡಾಗಿ ಎಲ್ಲಿಗೊ ಹೊರಟ ನಾವು ಇಲ್ಲಿಗೆ ಬಂದಿದ್ದೇವೆ.ಆಹಾ ಜೀವನ ತುಂಬ ಸುಂದರವಾಗಿದೆ ಅಂತ ಅನ್ನಿಸ್ತಿದೆ.ಅಲ್ಲಿ ಒಬ್ಬರು ಸತ್ತು ಹೋಗಿ ತುಂಬ ಜನ ಸೇರಿ ಶೋಕ ಗೀತೆ ಹಾಡ್ತಾ ಇದ್ರೆ ಅದು ನಮ್ಮ ಕಣ್ಣಿಗೆ ಕಾಣದೆ ನಾವು ಚಟ್ಟ ನೋಡ್ಕೊಂಡು ಓಹೋ ಏನೋ ಸೂಪರ್ ಆಗಿ ಮಾಡ್ತಾ ಇದಾರಲ್ಲ...ಇರಲಿ.ಅಂದುಕೊಂಡು ಬಂದಿದ್ವಿ...ಬರೀ ರೋದನೆಗಳೆ ತುಂಬಿಕೊಂಡಿದೆಯಲ್ಲ ಈ ಜಗತ್ತಲ್ಲಿ ಹಾಗಾಗಿ ನಮಗೆ ಎಲ್ಲಿ ಹೋದ್ರು ಬರೀ ಸೂಪರ್ ಗಳೇ ಕಾಣೋದು.
ನಾವು ಮೊದಲಿಂದ ಹೀಗಲ್ಲ, ಇತ್ತೀಚೆಗೆ ಹೀಗಾಗಿದೀವಿ.ಅಮ್ಮ ನನಗೆ ಹುಡುಗನ್ನ ಹುಡುಕುತ್ತಿರುವಾಗ ಅಮ್ಮನ ಪರದೈವ ಅಂದ್ರೆ ಅಪ್ಪ ನಮ್ಮ ಕಣ್ಣಿಗೆ ಕಸ ಹಾಕಿ ಅವನಿಗೆ ಹುಡುಗಿಯನ್ನು ಹುಡುಕುತ್ತಿದ್ದಾನೆ ಎರಡನೇ ಮದುವೆಗೆ...! ಅಮ್ಮನಿಗೆ ಬೇರೆ ಜಗತ್ತೇ ಗೊತ್ತಿಲ್ಲ .ಯಾರು ಎಲ್ಲೇ ಹೊಡೆದರು ಅಪ್ಪನ ಪಾದದ ಬಳಿಯೆ ಬಂದು ಬೀಳುವುದು ಅವಳ ಖಯಾಲಿ.ಕಷ್ಟಪಟ್ಟು ಅನ್ನಕ್ಕಾಗಿಯೆ ಕೆಲಸ ಮಾಡುವಾಗ ಊಟ ಮಾಡಲು ಸಮಯವಿಲ್ಲದೆ,ಹಸಿವು ಹೊಟ್ಟೆಯಲ್ಲಿ ಸದ್ದಿಲ್ಲದೆ ಸಮಾಧಿಯಾಗಿರುತ್ತದೆ. ಗಂಡನಿಗೆ ಹೇಗಿದಿಯೋ ಅಂದ್ರೆ, ನಾ ಹೇಗಾದ್ರು ಇರ್ತೀನಿ, ಕೇಳಕ್ಕೆ ನೀನೇನು ಡಾಕ್ಟ್ರಾ ಅಂತಾನೆ...! ಏನೋ ಸ್ವಲ್ಪ ಮಾತಾಡ್ಸೋಣ ಅಂತ ಪಕ್ಕದ ಮನೆ ಆಂಟಿ ಬಂದ್ರೆ ಅವರ ಹಿಂದೇನೆ ’ಎಲ್ಲಿ ಸತ್ತ್ಲೋ ಆ ಮುಂಡೆ ’ ಅಂತ ಆ ಗಂಡ ಅನ್ನೋ ಪಿಶಾಚಿ ಆ ಹೆಂಗಸಿನ ಹಿಂದೆಯೇ ಬಂದಿರತ್ತೆ.ಮುದ್ದಿನ ಹುಡುಗನಿಗೆ ಐ ಮಿಸ್ಸ್ ಯು ಕಣೋ ಅಂದ್ರೆ ಅದು ನಿನ್ ಪ್ರಾಬ್ಲಂ ಹೋಗೆ ಅಂತಾನೆ.ಮಧ್ಯೆ ಇಲ್ಲೊಂದು ಹಾಡಿನ ಸಾಲು’ಅಳಬೇಕು ಒಮ್ಮೆ ಅಂತನಿಸಿದೆ ಖುಷಿ ಮೇರೆ ಮೀರಿ ಇಂದು’. ಯಾವ ಯಾವ ದಿಕ್ಕಿನಲ್ಲಿ ನಿಂತು ನೋಡಿದರು ನಗಲಿಕ್ಕೆ ಕಾರಣವೇ ಕಾಣದಿದ್ದಾಗ ನಾವು ನಗ್ತೇವೆ.ಮನಸ್ಸಿಗೆ ಬೆಲೆ ಕೊಡೋದು ಅಂದರೆ ಏನು ಅಂತಾನೆ ಗೊತ್ತಿಲದ ಜನಸಾಗರದ ಮಧ್ಯೆ ನಿಂತ ನಮ್ಮ ಕಣ್ಣಿಗೆ ಎಲ್ಲರೂ ಹೇಗೇಗೋ ಕಾಣ್ತಾರೆ.ಪ್ರತಿಯೊಬ್ಬರು ನಮ್ಮ ಹಾಗೇನೆ ಸಮಸ್ಯೆಗಳ  ಮಧ್ಯೆ ನೆಮ್ಮದಿ ಹುಡುಕಿಕೊಂಡು ಬದುಕ್ತಾರೇನೊ...ಅಸಲು ವಿಷಯ ಏನು ಗೊತ್ತಾ...?ಮೊದಲು ಯಾರದ್ರು ನಮ್ಮ ಸ್ನೇಹ ಬಯಸಿದ್ರೆ ಖುಷಿ ಆಗ್ತಾ ಇತ್ತು.ನಾವು ಪೂರ್ತಿಯಾಗಿ ಅಂಗೀಕರಿಸುತ್ತಿದ್ದೆವು...ಏನಾದ್ರು ಕೇಳಿದ್ರೆ ಅದು ನಮ್ಮ ಹತ್ರ ಇದ್ರೆ ಕೊಡೋಣ ಪಾಪ ಅನ್ನಿಸ್ತಿತ್ತು.ಸಂಬಧಗಳ ವಿವಿದ ಮುಖಗಳು ಗೊತ್ತೇ ಇರ್ಲಿಲ್ಲ.ಈಗ ಯಾರಾದ್ರು ಮಾತಾಡ್ಸಿದ್ರೆ ಸಾಕು ವಕ್ರ ದೃಷ್ಟಿ ನೆಟ್ಟಗಾಗತ್ತೆ.ಅದಿಲ್ಲದೆ ನಾವು ಜಗತ್ತನ್ನು ನೋಡೋದೆ ಬಿಟ್ಟಿದೀವಿ.ನನ್ನಿಂದ ಏನು ಸಿಗತ್ತೆ ಅಂತ ಈ ಮನುಷ್ಯ ಹತ್ತಿರ ಬಂದಿದಾನೆ....? ಇವರು ಇತ್ತೀಚೆಗೆ ಚೆಂದಾಗಿ ಮಾತಾಡಿಸ್ತಾರಲ್ಲ ಯಾಕಿರಬಹುದು....? ಇದನ್ನ ನಾನು ಯಾಕೆ ಕೊಡ್ಬೇಕು...ಅವರೇನು ಕೊಡ್ತಾರ ? ಇಂತಹ ಆಲೋಚನೆಗಳು ಯಾವ ಪರಿ ಬೆಳೆದಿದೆ ಅಂದರೆ ’ಅಮ್ಮ ಏನು ಸುಮ್ ಸುಮ್ನೆ ಪ್ರೀತಿ ಮಾಡ್ತಾಳ...? ಸುಮ್ ಸುಮ್ನೆ ಸಾಕ್ತಾಳ...? ಏನಿಲ್ಲ.ನಾವು ದೊಡ್ಡೋರಾದ ಮೇಲೆ ನಾವು ಅವರನ್ನು ಸಾಕಲಿ,ಚೆನ್ನಾಗಿ ನೋಡಿಕೊಳ್ಳಲಿ ಎಂದೆ ಸಾಕಿರ್ತಾಳೆ’.ಅನ್ನೋ ಅಷ್ಟು ಹಾಳಾಗಿ ಹೋಗಿದೆ ಮನಸ್ಸು.ಇದರಲ್ಲಿ ನಮ್ಮದೇನು ತಪ್ಪಿಲ್ಲ.ನಮ್ಮ ಈ ದುರ್ಬುಧ್ದಿಗೆ ಸಹಾಯ ಮಾಡಿದ್ದು ಅದನ್ನು ಹುಟ್ಟಿಸಿದ್ದು ಇದೇ ಜಗತ್ತು.ಇಲ್ಲಿ ಪ್ರೇಮ, ಅನುಕಂಪ, ಕರುಣೆ, ನಂಬಿಕೆ ಎಲ್ಲ ಎಲ್ಲಿ ಉಳಿಯತ್ತೆ ? ಉಳಿಸಿಕೊಳ್ಳಲು ನೀವು ಸಹಾಯ ಮಾಡ್ತೀರ....? ನಾವು ಯಾರದ್ರು ಬಿದ್ರೆ ನಗೋದನ್ನು ಕಲಿತಿದ್ದೇವೆ.ನಾವು ಬೇರೆಯವರಿಂದ ಏನಾದ್ರು ಕೇಳಿ ಪಡ್ಕೊಂಡಿದ್ರೆ ವಾಪಸ್ ಕೊಡೊದನ್ನ ನೆನಪಿಟ್ಟುಕೊಂಡು ಮರಿತೇವೆ.ಕೊಟ್ಟವರೆ ನೆನಪು ಮಾಡಿ ಕೇಳಿದ್ರೆ ’ಬೇರೆ ತಂದುಕೊಳ್ಳಿ , ನಿಮಗೇನು ಕಮ್ಮೀನಾ?’ ಅಂತ ಉಡಾಫೆಯ ಉತ್ತರಗಳನ್ನು ಕೊಡ್ತೇವೆ. ಹೀಗಾಗಿ ನಾವು ಮೊದಲಿಗಿಂತ ಚೆನ್ನಾಗಿ ಬದುಕುತ್ತಿದ್ದೇವೆ.ನಮಗೆ  ಬೇಜಾರೆ ಆಗಲ್ಲ.ಸೂಕ್ಷ್ಮತೆಗಳು ಅರ್ಥವೇ ಆಗಲ್ಲ.ನಾವು ಎಲ್ಲಿ ಹೋದರು ಸೂಪರ್.  

1 comment:

  1. tumba chennagi baritira, ushta aaytu baraha,

    houdu, neevu elli hodaroo super :)

    ReplyDelete